ಟ್ರಯಾಸಿಕ್ -
ಮೀಸೋಜೋóಯಿಕ್ ಯುಗದ (225 ದ.ಲ.ವ. ಪ್ರಾಚೀನದಿಂದ 65 ದ.ಲ.ವ. ಪ್ರಾಚೀನದ ವರೆಗಿನ ಕಾಲ) ಪ್ರಥಮ ಕಲ್ಪದ ಶಿಲಾವ್ಯವಸ್ಥೆ. ಇದು ನಿಕ್ಷೇಪಗೊಂಡ ಕಾಲಕ್ಕೂ ಟ್ರಯಾಸಿಕ್ ಎಂದೇ ಹೆಸರು. ಇದರ ಕಾಲಾವಧಿ 225 ದ.ಲ.ವ. ಪ್ರಾಚೀನದಿಂದ 190 ದ.ಲ.ವ. ಪ್ರಾಚೀನದವರೆಗೆ. ಜರ್ಮನಿಯ ನೈಋತ್ಯ ಭಾಗದಲ್ಲಿ, ಪರ್ಮಿಯನ್ ಶಿಲಾಸ್ತೋಮದ ಮೇಲೆ ಮೀಸೋಜೋóಯಿಕ್ ಯುಗದ ಆದಿಭಾಗವನ್ನು ಪ್ರತಿನಿಧಿಸುವ ಶಿಲೆಗಳು ನಿಕ್ಷೇಪಗೊಂಡಿವೆ. ಜರ್ಮನಿಯ ಎಲ್ಲ ಭಾಗಗಳಲ್ಲಿಯೂ ಈ ಶಿಲೆಗಳನ್ನು ಮೂರು ನಿರ್ದಿಷ್ಟ ಭಾಗಗಳನ್ನಾಗಿ ವಿಭಜಿಸಬಹುದು. ಆದ್ದರಿಂದ ಎಸ್. ಫಾನ್ ಆಲ್ಬರ್ಟಿ ಎಂಬಾತ ಈ ಶಿಲೆಗಳನ್ನು ಟ್ರಯಾಸಿಕ್ ಶಿಲಾಸ್ತೋಮಗಳು ಎಂದು ಹೆಸರಿಸಿದ (1834). ಆದರೆ ಪಶ್ಚಿಮ ಯೂರೋಪ್ ಮತ್ತು ಇಂಗ್ಲೆಂಡಿನಲ್ಲಿ ಈ ತ್ರಿವಿಭಜನೆ ಕಾಣಬರುವುದಿಲ್ಲ. ಅಂದರೆ ಟ್ರಯಾಸಿಕ್ (ತ್ರಿವಿಭಜನೆ) ಡ್ಯಾಸ್‍ನಂತೆ (ದ್ವಿವಿಭಜನೆ) ಪ್ರಾದೇಶಿಕ ವ್ಯಾಪ್ತಿಯನ್ನು ಮಾತ್ರ ಪಡೆದಿದೆ.

ಯೂರೋಪಿನಲ್ಲಿ ಟ್ರಯಾಸಿಕ್ ಕಾಲದ ಮೂರು ವಿಧದ ನಿಕ್ಷೇಪಗಳನ್ನು ಕಾಣಬಹುದು. ಇಂಗ್ಲೆಂಡಿನಲ್ಲಿ ಭೂ ಜಲನಿಕ್ಷೇಪ ಆಗಿರುವುದು. ಜರ್ಮನಿಯಲ್ಲಿ ಭೂಮಿಯಿಂದ ಸುತ್ತುವರಿದ. ಆಳವಿಲ್ಲದ ಖಾರಿಗಳಲ್ಲಿ ನಿಕ್ಷೇಪಕಾರ್ಯ ನಡೆದಿದೆ. ಈ ವಿಧದ ನಿಕ್ಷೇಪ ಸ್ಯಾಕ್ಸೊನಿಯಿಂದ ಉತ್ತರ ಐರ್ಲೆಂಡ್ ಮತ್ತು ಬೇಸಲ್‍ನಿಂದ ಜರ್ಮನಿಯ ಬಯಲಿನ ವರೆಗೆ ಇರುವ ಪ್ರದೇಶಗಳಲ್ಲಿ ನಡೆದಿದೆ. ಆಲ್ಪ್ಸ್ ಪರ್ವತ ಪ್ರದೇಶಗಳಲ್ಲಿ ಸಾಗರದ ಆಳ ನಿಕ್ಷೇಪ ಆಗಿರುತ್ತದೆ.
ಜರ್ಮನಿ : ಜರ್ಮನಿಯ ಟ್ರಯಾಸಿಕ್ ಸ್ತೋಮವನ್ನು ಈ ರೀತಿ ವಿಭಜಿಸಲಾಗಿದೆ.
ಮೇಲ್ಭಾಗ-ಕ್ಯೂಪರ್	ರಯಾಟಿಕ್
	ಕ್ಯೂಪರ್
ಮಧ್ಯಭಾಗ-ಮುಷಲ್ ಕಾಕ್
ಕೆಳಭಾಗ-ಬುಂಟರ್

ಬುಂಟರ್ ಶಿಲಾಶ್ರೇಣಿ ಮುಖ್ಯವಾಗಿ ಮರಳು ಶಿಲೆಗಳಿಂದ ಕೂಡಿದೆ. ಇವು ಬಹುವಾಗಿ ಭೂಜಲ ನಿಕ್ಷೇಪಗಳು. ಇವುಗಳಲ್ಲಿ ಸಸ್ಯಾವಶೇಷಗಳೂ (ವಾಲ್ಝಿಯ) ದ್ವಿಚರ ಪ್ರಾಣಿಗಳ ಎಲುಬುಗಳೂ ಹೆಜ್ಜೆಗಳೂ ಇವೆ. ಮುಷಲ್ ಕಾಕ್ ಶ್ರೇಣಿ ಸಾಗರಜನಿತ ಸುಣ್ಣಶಿಲೆಗಳಿಂದ ಕೂಡಿದೆ. ಈ ಭಾಗ ಫ್ರಾನ್ಸ್ ಕಡೆಗೆ ಹೋದಂತೆಲ್ಲ ಕಿರಿದಾಗುತ್ತದೆ ; ಆದರೆ ಆಲ್ಟ್ಸ್ ಕಡೆಗೆ ಹೆಚ್ಚಾಗುತ್ತದೆ. ಈ ಶಿಲೆಗಳ ಜೀವ್ಯವಶೇಷಗಳಲ್ಲಿ ಎನ್‍ಕ್ರೈನಸ್ ಲಿಲ್ಲಿಪಾರ್ಮಿಸ್ ಮತ್ತು ಸೆರಟೈಟಸ್ ನೊಡೊಸಸ್ ಮುಖ್ಯವಾದವು. ಮೇಲ್ಭಾಗದ ಶಿಲಾಶ್ರೇಣಿಯು ಬಹುಬಣ್ಣದ ಮರಳುಶಿಲೆಗಳು, ಜೇಡು ಮತ್ತು ಮಾರಲ್ ನಿಕ್ಷೇಪಗಳಿಂದ ಕೂಡಿದೆ. ಇದಕ್ಕೆ ಕ್ಯೂಪರ್ ಶಿಲಾಶ್ರೇಣಿ ಎಂದು ಹೆಸರು. ಇದರಲ್ಲಿ ಲಾಬಿರಿಂಥೊಡಾಂಟ್ ದ್ವಿಚರ ಪ್ರಾಣಿಗಳ ಎಲುಬು ಪದರವೂ ಕೆಲವು ಕಲ್ಲದ್ದಲು ಪದರಗಳೂ ಇವೆ. ಟಿರೋಪಿಲ್ಲಮ್, ವಾಲ್ಝಿಯ ಮತ್ತು ಅರಕೇರಿಯ ಇವುಗಳಲ್ಲಿರುವ ಮುಖ್ಯ ಸಸ್ಯವಶೇಷಗಳು.

	ಇಂಗ್ಲೆಂಡ್ : ಇಂಗ್ಲೆಂಡಿನ ಹೊಸ ಕೆಂಪು ಮರಳು ಶಿಲಾಸ್ತೋಮ ಒಂದೇ ವಿಧದ ಶಿಲಾಸಂಚಯನದಿಂದ ಆಗಿದ್ದರೂ ಅದರ ಪೂವಾರ್ಧದಲ್ಲಿರುವ ಜೀವ್ಯವಶೇಷಗಳು ಪ್ರಾಚೀನ ಜೀವಯುಗದ (ಪೇಲಿಯೋಜೋóಯಿಕ್) ಅಂತ್ಯಕಾಲವನ್ನೂ ಉತ್ತರಾರ್ಧದಲ್ಲಿ ಇರುವುವು ಮಧ್ಯಜೀವಯುಗದ (ಮೀಸೋಜೋóಯಿಕ್) ಆದಿಕಾಲವನ್ನು ಸೂಚಿಸುತ್ತವೆ. ಆದ್ದರಿಂದ ಈ ಸ್ತೋಮದ ಉತ್ತರಾರ್ಧವನ್ನು ಟ್ರಯಾಸಿಕ್ ಸ್ತೋಮ ಎಂದು ಪರಿಗಣಿಸಲಾಗಿದೆ. ಇದು ಪಶ್ಚಿಮಕ್ಕೆ ವಿಸ್ತರಿಸಿದ ಜರ್ಮನ್ ಮಾದರಿಯ ನಿಕ್ಷೇಪ ; ಆದರೆ ಇದರ ಮಧ್ಯಭಾಗ ಪ್ರತಿನಿಧಿಸಿಲ್ಲ. ಇಂಗ್ಲೆಂಡಿನ ಟ್ರಯಾಸಿಕ್ ಸ್ತೋಮವನ್ನು ಕೆಳಭಾಗ ಮತ್ತು ಕ್ಯೂಪರ್ ಎಂದು ಹೆಸರು. ಇವೆರಡರ ಮಧ್ಯೆ ಅನನುರೂಪ್ಯತೆ ಉಂಟು. ಬುಂಟರ್ ಶಿಲಾಶ್ರೇಣಿ ಚುಕ್ಕೆಮರಳು ಶಿಲೆಗಳಿಂದ ಕೂಡಿವೆ. ಇವುಗಳ ಮಧ್ಯೆ ಗುಲ್ಮವರ್ಣದ, ಗುಂಡಾದ ನೊರಜು ಕಲ್ಲುಗಳ ಪದರವಿದೆ. ಇವೆಲ್ಲ ಶಿಲೆಗಳೂ ಜೀವ್ಯವಶೇಷರಹಿತವಾದವು. ಕ್ಯೂಪರ್ ಶಿಲಾಶ್ರೇಣಿಯ ಕೆಳಭಾಗ ಕೆಂಪು ಮತ್ತು ಬಿಳಿಮರಳು ಶಿಲೆಗಳಿಂದಲೂ ಮೇಲ್ಭಾಗ ಕೆಂಪು ಮಾರಲ್ ಎಂಬ ಸುಣ್ಣ ಶಿಲೆಗಳಿಂದಲೂ ಆಗಿದೆ. ಮೇಲ್ಭಾಗದಲ್ಲಿ ಜಿಪ್ಸಮ್ ಮೊದಲಾದ ಲವಣಶಿಲಾ ಪದರಗಳಿವೆ. ಇವು ಸರೋವರಗಳ ಇಂಗುವಿಕೆಯಿಂದ ಆದ ನಿಕ್ಷೇಪಗಳು. ಕ್ಯೂಪರ್ ಶಿಲಾಶ್ರೇಣಿಯೂ ಜೀವ್ಯವಶೇಷರಹಿತವಾದುದೇ; ಆದರೆ ಇದರಲ್ಲಿ ದ್ವಿಚರಪ್ರಾಣಿಗಳ ಹೆಜ್ಚೆಗಳು ಸ್ಪಷ್ಟವಾಗಿ ಕಾದಿರಿಸಲ್ಪಟ್ಟಿವೆ.

ಕ್ಯೂಪರ್ ಶಿಲಾಶ್ರೇಣಿಯ ಮೇಲೆ ಇರುವ ಪದರಗಳಿಗೆ ಪೆನಾರ್ಕ್ ಪದರಗಳು ಎಂದು ಹೆಸರು. ಇವು ರಯಾಟಿಕ್ ಕಾಲದವು. ಪೆನಾರ್ತ್ ಪದರಗಳ ಹಂಚಿಕೆ ಜುರಾಸಿಕ್ ಕಾಲದ ಲಯಾಸಿಕ್ ಶಿಲೆಗಳ ಹಂಚಿಕೆಯನ್ನೇ ಅನುಸರಿಸಿದೆ. ಇವುಗಳಲ್ಲಿ ಟ್ರಯಾಸಿಕ್ ಕಾಲದ ಜೀವಿಗಳು ಮತ್ತು ಲಯಾಸಿಕ್ ಕಾಲದ ಜೀವಿಗಳ ಪೂರ್ವಜರೆನ್ನಾಲಾಗುವ ಜೀವಿಗಳ ಅವಶೇಷಗಳಿವೆ. ಟ್ರಯಾಸಿಕ್ ಕಾಲದ ಜೀವಿಗಳು ಕೂಡ ರಯಾಟಿಕ್ ಕಾಲದ ಸ್ಪಷ್ಟ ಮುದ್ರೆಯನ್ನು ಹೊಂದಿವೆ.
ಆಲ್ಪ್ಸ್ ಪ್ರದೇಶ : ಈ ಪ್ರದೇಶದಲ್ಲಿ ಪ್ರಾಚೀನ ಜೀವಯುಗದ ಶಿಲಾಸ್ತೋಮಗಳು ಪರ್ಮಿಯನ್ ಕಾಲದ ಅಂತ್ಯದಲ್ಲಿ ಮೇಲೋಗೆಯಲ್ಪಟ್ಟವು. ಆದ್ದರಿಂದ ಉತ್ತರ ಮತ್ತು ದಕ್ಷಿಣ ಸಾಗರ ಎಂಬ ಎರಡು ಸಾಗರಗಳು ಟ್ರಯಾಸಿಕ್ ಕಾಲದಲ್ಲಿ ಇದ್ದುವು. ಮೊಜ್ಸಿಸೊವಿಕ್ಸ್ ಎಂಬಾತ ಈ ಸಾಗರಗಳನ್ನು ಅನುಕ್ರಮವಾಗಿ ಜುವಾವಿಯನ್ ಮತ್ತು ಮೆಡಿಟರೇನಿಯನ್ ಪ್ರಾಂತಗಳು ಎಂದು ಕರೆದಿದ್ದಾನೆ. ಉತ್ತರ ಪ್ರಾಂತ ಬಲು ಚಿಕ್ಕದು; ಅದರಲ್ಲಿ ಮರಳು ನಿಕ್ಷೇಪವೇ ಹೆಚ್ಚು. ಮೆಡಿಟರೇನಿಯನ್ ಪ್ರಾಂತ ವಿಶಾಲವಾದುದು. ಇದರ ನಿಕ್ಷೇಪದ ಉಷ್ಣತೆ ಅಧಿಕವಾಗಿದೆ. ಅಲ್ಲದೆ ಹೇರಳವಾದ ಜೀವ್ಯವಶೇಷಗಳೂ ಇಲ್ಲಿ ಇವೆ. ಆದ್ದರಿಂದಲೇ ಇದು ಟ್ರಯಾಸಿಕ್ ಕಾಲದ ಮಾದರಿ ನಿಕ್ಷೇಪವೆನಿಸಿದೆ. ಈ ಸ್ತೋಮವನ್ನು ಮೂರು ಮುಖ್ಯಭಾಗಗಳನ್ನಾಗಿ ವಿಭಜಿಸಿ, ಇವನ್ನು ಜರ್ಮನಿಯ ಮೂರು ಭಾಗಗಳಿಗೆ ಸರಿದೂಗಿಸಲಾಗಿದೆ.

				ರಯಾಟಿಕ್
		ಮೇಲ್ಭಾಗ		ಕಾರ್ನಿಕ್		ಕ್ಯೂಪರ್
				ನೋರಿಕ್
ಟ್ರಯಾಸಿಕ್ ಸ್ತೋಮ
				ಲಡನಿಕ್
		ಮಧ್ಯಭಾಗ	ಅನೈಸಿಕ್		ಮುಷಲ್ ಕಾಕ್

		ಕೆಳಭಾಗ	-ಸ್ಕಿತಿಯನ್-	ಬುಂಟರ್

ಕೆಳಭಾಗದಲ್ಲಿ ಜೇಡುಶಿಲೆಯೇ. ಹೆಚ್ಚು. ಮೈರೊಪೋರಿಯ ಕಾಸ್ಟೇಟ ಮತ್ತು ಟಿರೂಲೈಟಿಸ್ (ಸೆರಟೈಟಿಸ್) ಕ್ಯಾಸಿಯಾನಸ್ ಈ ಭಾಗದ ವಿಶಿಷ್ಟ ಜೀವವಶೇಷಗಳು. ಮೊದಲನೆಯದು ಜರ್ಮನ್ ಮತ್ತು ಆಲ್ಪೈನ್ ಎರಡು ನಿಕ್ಷೇಪಗಳಲ್ಲಿಯೂ ಇರುವುದರಿಂದ ಶಿಲಾಸಮದೂಗುವಿಕೆಯಲ್ಲಿ ಸಹಕಾರಿಯಾಗಿದೆ. ಮಧ್ಯಭಾಗದಲ್ಲಿ ಸುಣ್ಣಶಿಲೆ ಮತ್ತು ಡಾಲೊಮೈಟ್ ಶಿಲೆಗಳೇ ಹೆಚ್ಚು. ಅನೈಸಿಕ್ ಶಿಲೆಗಳಲ್ಲಿ ಸೆರಟೈಟಿಸ್ ಬೈನೊಡೊಸಸ್ ಮತ್ತು ಸೆರಟ್ರೈನೊಡೊಸಸ್ ವಿಶಿಷ್ಟ ಜೀವವಶೇಷಗಳಾಗಿವೆ. ಮೇಲ್ಭಾಗದ ಶಿಲೆಗಳು ನಿಕ್ಷೇಪವಾಗುವ ಹೊತ್ತಿಗೆ ಜುವಾವಿಯನ್ ಮತ್ತು ಮೆಡಿಟರೇನಿಯನ್ ಪ್ರಾಂತಗಳಿಗೆ ಇದ್ದ ಸಂಪರ್ಕ ಕಡಿದು ಬಿತ್ತು. ಮೇಲ್ಭಾಗದಲ್ಲಿ ಸುಣ್ಣಶಿಲೆ ಮತ್ತು ಅಮೃತಶಿಲೆಗಳೇ ಹೆಚ್ಚು. ಟ್ರಾಕಿಸೆರಾನ್ (ಸೆರಟೈಟಿಸ್) ಎಂಬುದರ ಅನೇಕ ಪ್ರಕಾರಗಳು ಒಂದಾದ ಮೇಲೊಂದರಂತೆ ಉದಯಿಸಿ ಗತವಂಶಿಗಳಾದವು. ಇವೆಲ್ಲ ಅಲ್ಪಾಯು ಪ್ರಕಾರಗಳು. ಅತ್ಯಂತ ಮೇಲ್ಭಾಗದಲ್ಲಿ ಮೆಗಲೊಡಾನ್ ಜೀವ್ಯವಶೇಷಗಳಿಂದ ಕೂಡಿದ ಸುಣ್ಣಶಿಲೆ ರೂಪುಗೊಂಡಿದೆ. ಈ ಕಾಲದಲ್ಲಿ ಜ್ವಾಲಾಮುಖಿಯ ಕಾರ್ಯಚರಣೆಯೂ ಆಯಿತು.

ಉತ್ತರ ಅಮೆರಿಕ : ಉತ್ತರ ಅಮೆರಿಕದಲ್ಲಿ ಟ್ರಯಾಸಿಕ್ ಸ್ತೋಮ ಸಾಗರ ನಿಕ್ಷೇಪ ಭೂಜಲ ನಿಕ್ಷೇಪ ಮತ್ತು ಅಗ್ನಿಶಿಲೆಗಳನ್ನು ಒಳಗೊಂಡಿದೆ. ಸಾಗರ ನಿಕ್ಷೇಪ ಪಶ್ಚಿಮತೀರಕ್ಕೆ ಮಿತಿಗೊಂಡಿದೆ. ಅದು ದಕ್ಷಿಣದಲ್ಲಿ ಮೆಕ್ಸಿಕೋದಿಂದ ಉತ್ತರದಲ್ಲಿ ಅಲಾಸ್ಕದ ವರೆಗೆ ವಿಸ್ತರಿಸಿದೆ. ಈ ಮಾದರಿಯ ನಿಕ್ಷೇಪ ನೆವಾಡ ಮತ್ತು ಕ್ಯಾಲಿಫೋರ್ನಿಯ ಪ್ರಾಂತಗಳಲ್ಲಿ ಅತ್ಯುತ್ತಮವಾಗಿ ಹೊರಕಾಣಿಸಿದೆ. ಭೂಜಲ ನಿಕ್ಷೇಪ ಅಟ್ಲಾಂಟಿಕ್ ತೀರದ ಕ್ಯಾರಲೈನ ಪ್ರಾಂತದಿಂದ ದಕ್ಷಿಣಕ್ಕೆ ನ್ಯೂಯಾರ್ಕ್ ಮತ್ತು ಮ್ಯಾಸಚೂಸೆಟ್ಸ್ ಪ್ರಾಂತಗಳ ವರೆಗೂ ರೂಪುಗೊಂಡಿದೆ. ಈ ಶಿಲೆಗಳಿಗೆ ನೆವಾರ್ಕ್ ಶ್ರೇಣಿ ಎನ್ನುವರು. ಅಲ್ಲದೆ ರಾಕೀಸ್ ಪರ್ವತ ಪ್ರದೇಶದಲ್ಲೆಲ್ಲ ಭೂಜಲ ನಿಕ್ಷೇಪ ಕಾರ್ಯ ನಡೆದಿದೆ. ಅಗ್ನಿಶಿಲೆಗಳು ಪಶ್ಚಿಮ ಮತ್ತು ಪೂರ್ವಪ್ರದೇಶಗಳೆರಡರಲ್ಲೂ ಆ ನಿಕ್ಷೇಪಗಳಲ್ಲಿ ಅಂತಸ್ಸರಣ ಮತ್ತು ಬಹಿಸ್ಸರಣ ಹೊಂದಿವೆ

ಇಂಡಿಯ : ಟ್ರಯಸಿಕ್ ಸ್ತೋಮ ಹಿಮಾಲಯದ ಉತ್ತರ ಭಾಗದಲ್ಲಿ ಇರುವ ಸ್ಪಿಟಿ ಪ್ರದೇಶದಲ್ಲಿ ಅತ್ಯುತ್ತಮ ರೀತಿಯಲ್ಲಿ ರೂಪುಗೊಂಡಿದೆ. ಈ ಶಿಲಾಸ್ತೋಮದ ಎಲ್ಲ ಭಾಗಗಳನ್ನೂ ಮೆಡಿಟರೇನಿಯನ್ ಪ್ರದೇಶದ ಟ್ರಯಾಸಿಕ್ ಸ್ತೋಮಕ್ಕೆ ಸುಲಭವಾಗಿ ಹೋಲಿಸಬಹುದು. ಇದು ನೇಪಾಳ, ಕುಮಾಯೂನ್ ಪ್ರದೇಶಗಳ ವರೆಗೂ ವಿಸ್ತರಿಸಿದೆ. ಕಾಶ್ಮೀರದಲ್ಲಿ ಈ ಸ್ತೋಮ ಇನ್ನೂ ದಪ್ಪವಾಗಿದೆ; ಆದರೆ ಅಲ್ಲಿ ಸ್ಪಿಟಿ ಪ್ರದೇಶದಷ್ಟು ಸಂಪೂರ್ಣ ಪ್ರಾತಿನಿಧ್ಯ ಇಲ್ಲ ; ಮತ್ತು ಇದರ ಪರಿಶೋಧನೆಯೂ ಆಗಿಲ್ಲ. ಸಾಲ್ಟ್‍ರೇಂಜ್ ಪ್ರದೇಶದಲ್ಲಿ ಈ ಕಾಲದ ಶಿಲೆಗಳು ಅಪೂರ್ಣವಾಗಿ ರೂಪುಗೊಂಡಿವೆ. ಮೇಲಿನ ಪ್ರದೇಶಗಳೇ ಅಲ್ಲದೆ ಬಲೂಚಿಸ್ತಾನ, ಬರ್ಮ ಮುಂತಾದ ಕಡೆಗಳಲ್ಲಿಯೂ ರೂಪುಗೊಂಡಿವೆ.

ಸಿಟಿ ಪ್ರದೇಶ : ಇಲ್ಲಿ ಟ್ರಯಾಸಿಕ್ ಸ್ತೋಮ ಅತ್ಯುತ್ಕøಷ್ಟ ರೀತಿಯಲ್ಲಿ ಮೈದಳೆದಿದೆ. ಈ ಪ್ರದೇಶದ ಲಿಲಾಂಗ್ ಕಣಿವೆಯಲ್ಲಿ, ಇದು 1219.2 m.ಗಳಷ್ಟು. ದಪ್ಪ ಸುಣ್ಣಶಿಲೆಯಿಂದ ಕೂಡಿದೆ. ಇವು ಪೂರ್ಣವಾಗಿ ಸಾಗರಜನಿತ ಶಿಲೆಗಳು. ಇಲ್ಲಿ ಜೀವ್ಯವಶೇಷಗಳು ಹೇರಳವಾಗಿವೆ. ಈ ಸಮುದಾಯದ ಮೇಲ್ಭಾಗ ಮಾತ್ರ ಜೀವ್ಯವಶೇಷರಹಿತವಾಗಿದೆ. ಇದು ಜುರಾಸಿಕ್ ಕಲ್ಪದಕಿಯಾಟು ಸುಣ್ಣಶಿಲೆಗಳೊಡನೆ ಬೆರೆಯುತ್ತದೆ.

ಟ್ರಯಾಸಿಕ್ ಕಲ್ಪದ ಜೀವರಾಶಿ : ಈ ಕಲ್ಪದ ಜೀವರಾಶಿಯು ಪ್ರಾಚೀನ ಜೀವಯುಗ ಮತ್ತು ಮಧ್ಯಜೀವಯುಗಗಳ ಜೀವಪರಂಪರೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದೆ. ಆದರೆ ಸಸ್ಯಗಳಲ್ಲಿ ಮಧ್ಯಜೀವಯುಗದ ಅಚ್ಚು ಸ್ಪಷ್ಟವಾಗಿ ಕಾಣುತ್ತದೆ. ಪ್ರಾಚೀನ ಜೀವಯುಗ ಸಸ್ಯಗಳಾದ ಕ್ಯಾಲಮೈಟಿಸ್, ಲೆಪಿಡೊಡೆಂಡ್ರಾನ್ ಮತ್ತು ಸಿಜಿಲೇರಿಯಗಳು (ಸಿಜಿಲೇರಿಯಗಳು ವಿರಳವಾಗಿ ಪ್ರತಿನಿಧಿಸಲ್ಪಟ್ಟಿದೆ) ಗತವಂಶಿಗಳಾಗಿವೆ. ಪ್ರಾಚೀನ ಜೀವಯುಗದ ವಿಶಿಷ್ಟ ಸಸ್ಯ ವರ್ಗವಾದ ಟೆರಿಡೊಸ್ಟರ್ಮ್‍ಗಳೂ ವಂಶನಷ್ಟ ಹೊಂದಿವೆ. ಮಧ್ಯಜೀವಯುಗದ ಸಸ್ಯಗಳು ಇನ್ನೂ ಬಲವಾಗಿ ಬೇರೂರಿರಲಿಲ್ಲ. ಭೂವಿಜ್ಞಾನಿಗಳಿಗೆ ಪರಿಚಿತವಾದ ಟ್ರಯಾಸಿಕ್ ಸಸ್ಯವರ್ಗ ಆ ಕಲ್ಪದ ಅಂತ್ಯಕಾಲದ್ದು. ಈ ಸಸ್ಯಾಭಾವಕ್ಕೆ ಟ್ರಯಾಸಿಕ್ ಕಲ್ಪದಲ್ಲಿ ಸರ್ವಸಾಮಾನ್ಯವಾಗಿ ವ್ಯಾಪಿಸಿದ್ದ ಮರುಭೂಮಿ ವಾಯುಗುಣದ ಪ್ರಭಾವವೇ ಕಾರಣವಾಗಿರಬೇಕು. ಟ್ರಯಾಸಿಕ್ ವನಗಳಲ್ಲಿ ಸೈಕ್ಯಾಡ್ ಮತ್ತು ಕೋನಿಫೆರಸ್ ಮರಗಳೇ ಹೆಚ್ಚು. ವನಗಳ ನೆಲಫರ್ನ್ ಮತ್ತು ಹಾರ್ಸ್‍ಟೈಲ್ ಸಸ್ಯಗಳಿಂದ ಮುಚ್ಚಿತ್ತು. ಗೊಂಡವಾನ ಖಂಡದಲ್ಲಿ ಗ್ಲಾಸಾಪ್ಟರಿಸ್ ಗಿಡಗಳೂ ಉತ್ತರ ಖಂಡದಲ್ಲಿ ಟಿರೋಫಿಲ್ಲಮ್ ಎಂಬ ಸೈಕ್ಯಾಡ್ ಮತ್ತು ವಾಲ್ಟ್‍ಝಿಯ ಎಂಬ ಕೋನಿಫೆರ ಗಿಡಗಳೂ ಮುಖ್ಯವಾದವು. ಇಂಡಿಯದಲ್ಲಿ ಗ್ಲಾಸಾಪ್ಟರಿಸ್, ಸ್ಕೈಜೊನ್ಯೂರ, ನೊಯಗರತಿಯಾಪ್ಸಿಕ್ ಮತ್ತು ತಿನ್ಪೆಲ್ಡಿಯಗಳು ಮುಖ್ಯ ಸಸ್ಯಗಳು.

ಟ್ರಯಾಸಿಕ್ ಕಲ್ಪದ ಆರಂಭದಲ್ಲಿ ಪ್ರಾಣಿವರ್ಗಗಳಲ್ಲಿ ತೀವ್ರಬದಲಾವಣೆಗಳಾಗಿರುವುದು ಸೂಚಿತವಾಗಿದೆ. ಟ್ರೈಲೊಬೈಟುಗಳು ಬ್ಲಾಸ್ಟಾಯಿಡುಗಳು ಮತ್ತು ಪ್ರಾಚೀನ ಜೀವಯುಗದ ಎಲ್ಲ ಎಕೈನೊಡರ್ಮ್ ಶಾಖೆಗಳು ಸಂಪೂರ್ಣವಾಗಿ ವಂಶನಷ್ಟ ಹೊಂದಿದವು. ಆದರೆ ಎನ್‍ಕ್ರೈನಿಡೆ ಮತ್ತು ಪೆಂಟಕ್ರೈನಿಡೆ ಎಂದು ಎರಡು ಜಾತಿಯ ಕ್ರೈನಾಯಿಡುಗಳು ಹೇರಳವಾಗಿದ್ದವು. ರೂಗೋಸ ಹವಳಗಳು ಸಂಪೂರ್ಣವಾಗಿ ವಂಶನಷ್ಟ ಹೊಂದಿದುವು. ಅವುಗಳ ಸ್ಥಾನವನ್ನು ಷಟ್‍ಭಿತ್ತಿ ಹವಳಗಳು ಹಿಡಿದುಕೊಂಡವು. ತ್ಯಾಮ್ನಾಸ್ಟ್ರಿಯ. ಐಸಾಸ್ಟ್ರಿಯ. ತೀಕೊಸ್ಮಿಲಿಯ. ಸ್ಟೈಲಿನ, ಮಾಂಟ್ಲಿವಾಲ್ಸಿಯ ಮೊದಲಾದ ಷಟ್‍ಭಿತ್ತಿ ಹವಳಗಳು ದಿಬ್ಬಗಳನ್ನು ರಚಿಸಿದುವು. ಬ್ರ್ಯಾಕಿಯೋಪೊಡಗಳು ಟೆತಿಸ್ ಸಾಗರದಲ್ಲಿ ಹೇರಳವಾಗಿದ್ದುವು. ಆದರೆ ಇನ್ನುಳಿದ ಕಡೆಗಳಲ್ಲಿ ಅವು ಭಾರಿ ಆಘಾತಕ್ಕೊಳಗಾದುವು. ಆದರಿಂದ ಪುನಃ ಚೇತರಿಸಿಕೊಳ್ಳಲೇ ಇಲ್ಲ. ಪ್ರಾಚೀನ ಜೀವಯುಗದ ಬ್ರ್ಯಾಕಿಯೊಪೊಡಗಳಲ್ಲಿ ಅನೇಕ ವಿಧಗಳು ಗತವಂಶಿಗಳಾದವು. ಉಳಿದವು ಅತಿವಿರಳವಾಗಿದ್ದುವು. ಅತಿರಿಸ್ ಮತ್ತು ಸ್ಟ್ರೊಪೊಮೀನಗಳು ಟ್ರಯಾಸಿಕ್ ಸ್ತೋಮದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿವೆ. ರಿಂಕೊನೆಲ್ಲಿಡೆ ಮತ್ತು ಟೆರಿಬ್ರಾಟುಲಿಡೆ ಜಾತಿಯ ಬ್ರ್ಯಾಕಿಯೊಪೊಡಗಳು ಮಾತ್ರ ಉನ್ನತ ಸ್ಥಿತಿಯಲ್ಲಿದ್ದವು. ಲೆಮಲಿಬ್ರ್ಯಾಂಕ್ ಮತ್ತು ಶಂಖಗಳು ಹೇರಳವಾಗಿಯೂ ವಿವಿಧ ಜಾತಿಗಳಿಂದ ಕೂಡಿಯೂ ಇದ್ದುವು. ಮಯೊಪೋರ ಈ ಕಲ್ಪದ ವಿಶಿಷ್ಟ ಲೆಮಲಿಬ್ರ್ಯಾಂಕ್. ಆದರೆ ಪೆಕ್ಟನ್, ಹ್ಯಾಲೋಬಿಯ, ದಯೊನೆಲ್ಲಾ, ಮಾನಟಿಸ್, ಮೆಗಲೊಡಾನ್ ಮೊದಲಾದವು ಹೆಚ್ಚು ಸಂಖ್ಯೆಯಲ್ಲಿ ಇದ್ದುವು.

ಈ ಕಲ್ಪದ ಪ್ರಾಣಿವರ್ಗಗಳಲ್ಲಿ ಎಲ್ಲರ ಲಕ್ಷ್ಯವನ್ನು ಸೆಳೆಯುವವುಗಳೆಂದರೆ ಅಮ್ಮೊನೈಟುಗಳು. ಅವು ಈ ಯುಗದಲ್ಲಿ ಪ್ರಭಾವ ಸ್ಥಾನಕ್ಕೇರಿದುವು. ಪ್ರಾಚೀನ ಜೀವಯುಗದಲ್ಲಿದ್ದ ಗೋನೆಯೋಟೈಟಿಸ್ ಎಂಬ ಜಾತಿ ವಂಶನಷ್ಟ ಹೊಂದಿ ಅವುಗಳ ಸ್ಥಾನದಲ್ಲಿ ಸೆರಟೈಟಸ್ ಮತ್ತು ಟಿರೊಲೆಸ್ಟಿಸ್‍ಗಳು ಕಾಣಿಸಿಕೊಂಡವು. ಈ ಅಮ್ಮೊನೈಟುಗಳು ಪ್ರಪಂಚ ವ್ಯಾಪ್ತಿಯನ್ನು ಪಡೆದಿರುವುದೇ ಅಲ್ಲದೆ, ಅನೇಕ ಅಲ್ಟಾಯುಪ್ರಕಾರ ಪರಂಪರೆಯಿಂದಲೂ ಕೂಡಿವೆ. ಓಟೊಸೆರಾಸ್ ಓಪಿಸೆರಾಸ್, ಮೀಕೊಸೆರಾಸ್, ಕ್ಝೀನೊಡಿಸ್ಕಸ್, ಹಿಡೆನ್‍ಸ್ಟ್ರೋಮಿಯ, ಫ್ಲ್ಲೆಮಿಂಗೈಟಿಸ್, ಕೊನಿಂಕೈಟಿಸ್, ಕೈಸರ್‍ಲಿಂಗೈಟಿಸ್, ಸಿಬ್ರೈಟಿಸ್, ಟಿಕೈಟಿಸ್, ಜಿಮ್ನೈಟಿಸ್ ಮತ್ತು ಟ್ರೊಪೈಟಿಸ್‍ಗಳು ಇಂಡಿಯದ ಮುಖ್ಯ ಸೆರಟೈಟಿಸ್ ಪ್ರಕಾರಗಳು. ಇವುಗಳ ಆಧಾರದ ಮೇಲೆ ಟ್ರಯಾಸಿಕ್ ಸ್ತೋಮದ ವಿಭಜನೆಯನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಾಗಿದೆ.								(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ